ಬಸ್ಸ್ ಫ್ರೀ ಬಗ್ಗೆ ಟೀಕೆ ಮಾಡುವರಿಗೆ ತನ್ನ FB ಯಲ್ಲಿ ಹಳೆಯ ನೆನಪು ಹಂಚಿಕೊಂಡ ಸರಳಾ

ಕೊಡತಗೇರಿ ಎಕ್ಸ್‌ಪ್ರೆಸ್‌ ಸುದ್ದಿ

ಕಳೆದ 15 ವರ್ಷಗಳ ಹಿಂದಿನ ಒಂದು ನೆನಪು. ಆಗತಾನೆ ಪದವಿ ಮುಗಿದಿತ್ತು. ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಇನ್ನೂ ತಿಂಗಳು ಬಾಕಿ ಇತ್ತು. ಹಾಸ್ಟೆಲ್ ವಾಸ್ತವ್ಯದ ಅವಧಿ ಮುಗಿದು ಮನೆಗೆ ಹೋಗಬೇಕಿತ್ತು.

ಆಗ ಖಾಸಗಿ ಸಂಸ್ಥೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದ ನಾನು, ದೂರದ ನನ್ನೂರಿಗೆ ಹೋಗಲು ಸಾಕಷ್ಟು ಹಣದ ಕೊರತೆಯಿಂದ ಸ್ನೇಹಿತೆಯ ಮನೆಯಲ್ಲಿ ಉಳಿದು ರಜೆಯ ಅವಧಿಯಲ್ಲಿ ಪೂರ್ಣಾವಧಿಯ ಕೆಲಸ ಮಾಡಲು ನಿರ್ಧರಿಸಿದ್ದೆ.

ಕೆಲಸಕ್ಕೆ ಅರ್ಜಿ ಹಾಕಲು ಓಡಾಡಬೇಕು. ಹೀಗೆ ಓಡಾಡಲು ಸ್ಟೂಡೆಂಟ್ ಬಸ್ ಪಾಸ್ ಅವಧಿ ಮುಗಿದಿದೆ. ಏನು ಮಾಡೋದು ಎಂದು ಯೋಚಿಸಿ ಟಿನ್ ಫ್ಯಾಕ್ಟರಿ ಸಮೀಪ ಇದ್ದ ನನ್ನ ಸ್ನೇಹಿತೆಯ ಮನೆಯಿಂದ ಮೆಜೆಸ್ಟಿಕ್ ವರೆಗೆ, ಅಲ್ಲಿಂದ ಓಕಳಿಪುರಂ, ಬಸವೇಶ್ವರ ನಗರ, ರಾಜಾಜಿನಗರ ಹೀಗೆ ಹಲವು ಕಡೆ ಎರಡು ದಿನ ನಡೆದುಕೊಂಡೇ ಪ್ರಯಾಣ ಮಾಡಿದೆ.

ಎರಡು ದಿನಗಳ ನಂತರ ನಿರಂತರ ಪ್ರಯಾಣದಿಂದ ತುಂಬಾ ದಣಿವಾಗಿದ್ದ ನನಗೆ ಕಾಲೆತ್ತಿ ಇಡಲಾರದಷ್ಟು ನೋವು, ಜ್ವರ ಕಾಣಿಸಿಕೊಂಡಿತು. ಇದರಿಂದ ಗಾಬರಿಯಾದ ನನ್ನ ಸ್ನೇಹಿತೆ ಹಾಗೂ ಅವಳ ತಾಯಿ ಏನಾಯ್ತು ಎಂದು ಕೇಳಿದಾಗ ಕಳೆದೆರಡು ದಿನಗಳ ದಿನಚರಿ ಅವರಿಗೆ ಹೇಳಿದೆ. ನನ್ನ ಸ್ಥಿತಿಯನ್ನು ಕೇಳಿ ಕಣ್ಣೀರಾದ ಆ ತಾಯಿ ಮಗಳು “ಅಮ್ಮ ಎಂತಾ ಹುಡುಗಿನೇ ನೀನು ನನಗೆ ಹೇಳಿದ್ದರೆ ನಾನು ನಿನಗೆ ಹಣದ ವ್ಯವಸ್ಥೆ ಮಾಡುತ್ತಿದ್ದೆನಲ್ಲ” ಎಂದು ಮರುಗಿದರು.

ತಂದೆ ಇಲ್ಲದ ಆ ಕುಟುಂಬ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿತ್ತು. ಇಂತದರಲ್ಲಿ ಕೆಲವು ದಿನ ನನಗೆ ಆಶ್ರಯ ಕೊಟ್ಟಿದ್ದೆ ದೊಡ್ಡದು. ಇನ್ನೂ ಹೆಚ್ಚು ಅವರಿಗೆ ಭಾರ ಆಗೋದು ಬೇಡ ಎಂದು ಈ ವಿಷಯ ಅವರಿಗೆ ಹೇಳಿರಲಿಲ್ಲ. ಇದಾದ ಮೇಲೆ ಅವರು ಸ್ವಂತ ಖರ್ಚು ಹಾಕಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೆಲಸ ಸಿಗುವವರೆಗೆ ದಿನದ ಪಾಸ್ ತೆಗೆಸಿ ಕೊಡುತ್ತಿದ್ದರು. ಕಷ್ಟದ ದಿನಗಳಲ್ಲಿ ಕೈಹಿಡಿದ ಆ ತಾಯಿಯ ಸಹಾಯ ನಾನೆಂದೂ ಮರೆಯಲಾರೆ.

ಇಂದು ಹೆಣ್ಣುಮಕ್ಕಳಿಗೆ ಉಚಿತವಾಗಿ ಬಸ್ ಪ್ರಯಾಣ ಯೋಜನೆ ಆರಂಭವಾಗಿದೆ. ಹೀಗಾಗಿ ನನ್ನ ಮಾಸದ ಈ ನೋವಿನ ದಿನಗಳು ನೆನಪಾದವು. ಕೆಲವು ಸಲ ಪರ್ಸಲ್ಲಿ 10 ರೂ. ಇರದ ಸ್ಥಿತಿ ಬಂದಿರುತ್ತೆ. ಇನ್ನೂ ಕೆಲವು ಸಲ ಟಿಕೆಟ್ ಗೆ 2 ರೂ. ಕಡಿಮೆ ಇದ್ದುದರಿಂದ ಎರಡು ಸ್ಟಾಪ್ ನಡೆದು ಮುಂದೆ ಹೋಗಿ ಬಸ್ ಹತ್ತಿದ ಪ್ರಸಂಗಗಳೂ ಜೀವನದಲ್ಲಿ ನಡೆದಿವೆ. ಹೀಗಿರುವಾಗ ನಮಗೆ ಸಿಕ್ಕ ಈ ವಿಶಿಷ್ಟ ಅವಕಾಶವನ್ನು ಸಹ ಕೆಲ ಹೆಂಗಸರು ಟೀಕಿಸುತ್ತಿರುವುದು ನೋವಾಗುತ್ತಿದೆ.
✍️ Sarala Satpute

error: Content is protected !!