ವರ್ಷವಾದರೂ ಪೂರ್ಣಗೊಳ್ಳದ ಯುಜಿಡಿ ಕಾಮಗಾರಿ: ಶಾಸಕ ಜನಾರ್ದನ ರೆಡ್ಡಿ ಆಕ್ರೋಶ

ಶೀಘ್ರ ಅಭಿವೃದ್ಧಿ ಯೋಜನೆಗಳು ಪೂರ್ಣ ಕಾರ್ಯಗತವಾಗಬೇಕು ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನಾರ್ದನ ರೆಡ್ಡಿಗಂಗಾವತಿ: ನಗರದಲ್ಲಿ ವರ್ಷಗಟ್ಟಲೇ ಆಮೆಗತಿಯಲ್ಲಿ ಸಾಗಿದ್ದ ಹಾಗೂ ಜನೋಪಯೋಗಕ್ಕೆ ಬಾರದ ಅವೈಜ್ಞಾನಿಕವಾಗಿ ಒಳ ಚರಂಡಿ ಕಾಮಗಾರಿ ನಡೆಸಿದ್ದೀರಿ ಎಂದು ನಗರಸಭೆ ಮತ್ತು ಟೆಂಡರ್ ಪಡೆದ ಗುತ್ತಿಗೆ ಕಂಪನಿ ಅಧಿಕಾರಿಗಳ ವಿರುದ್ಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಗರಂ ಆದರು.

ನಗರದ ನಗರಸಭೆ ಸಭಾಂಗಣದಲ್ಲಿ ನಗರದ ಅಭಿವೃದ್ಧಿ ಕುರಿತು ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರಾದ ಬಳಿಕ ಮೊದಲ ಬಾರಿಗೆ ಗಂಗಾವತಿ ನಗರಸಭೆ ಕಚೇರಿಗೆ ಭೇಟಿ ನೀಡಿದ ಅವರು, ಇಲ್ಲಿಯ ಸಭಾಂಗಣದಲ್ಲಿ ಅಧಿಕಾರಿಗಳ ಮತ್ತು ನಗರಸಭೆ ಕೆಲ ಸದಸ್ಯರೊಂದಿಗೆ ಸಾರ್ವಜನಿಕರ ಕುಂದು – ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮೊದಲು ನಗರಸಭೆಗೆ ಬರುತ್ತಿರುವ ನಾನಾ ಆದಾಯದ ಮೂಲ, ಅನುದಾನ, ಖರ್ಚು – ವೆಚ್ಚಗಳ ಮಾಹಿತಿ, ಅಭಿವೃದ್ಧಿ ಯೋಜನೆ, ಕುಂಠಿತಗೊಂಡ ಕಾಮಗಾರಿಗಳ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಒಳಚರಂಡಿ ಮತ್ತು ನೀರು ಸರಬರಾಜಿನ ವಿಷಯ ಪ್ರಸ್ತಾವಾಯಿತು.

ಒಳ ಚರಂಡಿಯಿಂದ ಗಂಗಾವತಿ ನಗರದ ಎಲ್ಲ ರಸ್ತೆಗಳು ತೀರಾ ಹದಗೆಟ್ಟು ನಗರದ ಸೌಂದರೀಕರಣ ಹಾಳಾಗಿದೆ ಎಂದು ಶಾಸಕ ಅಸಮಾಧಾನ ವ್ಯಕ್ತಪಡಿಸಿದರು. ಯುಜಿಡಿ ಕಾಮಕಾರಿ ವಿಳಂಬದ ವಿಚಾರದಲ್ಲಿ ಸಮಜಾಯಷಿ ನೀಡಲೆತ್ನಿಸಿದ ನಗರ ಯುಜಿಡಿ ಇಲಾಖೆ ಎಇಇ ಕೊರೆಪ್ಪ ಮಾಟೂರ್, ಎಇ ಅವಿನಾಶ್ ಮತ್ತು ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಳೆದ 20 ವರ್ಷದಿಂದಲೂ ನನೆಗುದಿಗೆ ಬಿದ್ದ ಒಳಚರಂಡಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಅನುದಾನ ಬಳಕೆಯಾಗಿದೆ ಹೊರತು 225 ಕಿ.ಮೀ. ವ್ಯಾಪ್ತಿಯ ಯೋಜನೆ ಶೇ. 50ರಷ್ಟು ಪೂರ್ಣಗೊಂಡಿಲ್ಲ. ಶುದ್ಧ ಕುಡಿಯುವ ನೀರಿನ 10 ವಲಯಗಳಲ್ಲಿ 4 ವಲಯಗಳು ನಗರಸಭೆಗೆ ಹಸ್ತಾಂತರವಾಗಿದೆ.

ಕೆಲಸಗಳು ವಿಳಂಬವಾದರೆ ಶಿಸ್ತು ಕ್ರಮ, ಎಚ್ಚರಿಕೆ: ಕೆಲವೆಡೆ ಕಾಮಗಾರಿ ಅಪೂರ್ಣವಾಗಿವೆ. ಯುಜಿಡಿ ನಿರ್ವಹಣೆ ವಿಚಾರದಲ್ಲಿ ನೈರ್ಮಲ್ಯ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಬೇಕಿದ್ದು, ನಗರಸಭೆ ಅನುದಾನ ಬಳಸಿಕೊಳ್ಳಿ. ನೆಪ ಹೇಳಿ ಯೋಜನೆಗಳ ವಿಳಂಬಕ್ಕೆ ಅವಕಾಶ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನೌಕರರ ಪ್ರತಿಯೊಂದನ್ನು ಗಮನಿಸಲಾಗುತ್ತಿದ್ದು, ಮುಂದಿನ ದಿನ ಸೋಮಾರಿಗಳಿಗೆ ತಕ್ಕ ಪಾಠ ಕಲಿಸುವೆ. ಇದೇ ತಿಂಗಳಾಂತ್ಯಕ್ಕೆ ಒಳಚರಂಡಿ ಮತ್ತು ದ್ವಿತೀಯ ಹಂತದ ಶುದ್ಧ ಕುಡಿವ ನೀರಿನ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗಬೇಕು. ನಿರ್ಲಕ್ಷಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು.

ನಗರದ ನೈರ್ಮಲೀಕರಣ ವಿಚಾರದಲ್ಲಿ ಜನರ ಸಹಕಾರ ಮುಖ್ಯವಾಗಿದ್ದು, ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯವಿಲ್ಲ. ತ್ಯಾಜ್ಯ ವಿಲೇವಾರಿ ವಿಚಾರದಲ್ಲೂ ವಾರ್ಡ್​ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸಬೇಕು. 14 ಪ್ರದೇಶಗಳಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಜಾಗ ಆಯ್ಕೆ ಮಾಡಲಾಗಿದೆ. ಶೌಚಾಲಯ ನಿರ್ವಹಣೆಗೆ ನಗರಸಭೆ ಅನುದಾನ ಕ್ರೋಢೀಕರಿಸುವ ಬಗ್ಗೆ ಚಿಂತನೆ ನಡೆದಿದೆ. ತೆರಿಗೆ ವಸೂಲಿ ಪ್ರಮಾಣ ಹೆಚ್ಚಾಗಬೇಕಿದ್ದು, ಜನರ ಕಾರ್ಯಗಳನ್ನು ನಿರ್ಲಕ್ಷಿಸಬಾರದು ಎಂದರು.

ಕರ್ತವ್ಯ ವಿಚಾರದಲ್ಲಿ ಯಾವುದೇ ಲಾಬಿಗೂ ಮಣಿಯಲ್ಲ, ನೌಕರರು ಮಣಿಯಬಾರದು. ನಿರ್ಲಕ್ಷಿಸಿದರೆ ಅಧಿಕಾರಿಗಳನ್ನೇ ನೇರ ಹೊಣೆಯನ್ನಾಗಿ ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು. ಸಭೆಗೆ ಹಾಜರಾಗುವಂತೆ ಎಲ್ಲ ಸದಸ್ಯರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಕೆಆರ್​ಪಿಪಿ ಸೇರ್ಪಡೆಯಾದ ಕೆಲವರು ಹೊರತು ಪಡಿಸಿದರೆ, ಕಾಂಗ್ರೆಸ್, ಬಿಜೆಪಿ ಬಹುತೇಕ ಸದಸ್ಯರು ಗೈರಾಗಿದ್ದರು. ಕೆಲ ಸಮಸ್ಯೆಗಳನ್ನು ತೆರೆದಿಟ್ಟ ಸದಸ್ಯರಿಗೆ, ನೀವು ಮೊದಲು ಲಾಭಿ ನಡೆಸುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಶಾಸಕರು ಸಲಹೆ ನೀಡಿದರು.

ಪೌರಾಯುಕ್ತ ವಿರೂಪಾಕ್ಷಮೂರ್ತಿ, ವ್ಯವಸ್ಥಾಪಕ ಷಣ್ಮುಖಪ್ಪ, ಪ್ರಭಾರ ಎಇಇ ಶಂಕರಗೌಡ, ನೈರ್ಮಲ್ಯ ನಿರೀಕ್ಷ ಚೇತನ್, ಜೆಡಿ ಪ್ರವೀಣ್​ ಕುಮಾರ್​, ಆರೋಗ್ಯ ನಿರೀಕ್ಷಕ ಎ. ನಾಗರಾಜ್ ಸೇರಿದಂತೆ ನಗರಸಭೆಯ ನಾನಾ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದರು.

You may have missed

ಸಿದ್ದರಾಮಯ್ಯ: ಅರಸು ದಾಖಲೆ ಸರಿಗಟ್ಟಿದ ‘ಅಹಿಂದ’ ಚಾಣಕ್ಯ – ಜನಪರ ಆಡಳಿತದ ಹೊಸ ಪರ್ವ ​ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಕೀರ್ತಿ ಈವರೆಗೆ ದಿವಂಗತ ಡಿ. ದೇವರಾಜ ಅರಸು (7 ವರ್ಷ 239 ದಿನಗಳು) ಅವರಿಗೆ ಸಲ್ಲುತ್ತಿತ್ತು. ಆದರೆ, ಜನವರಿ 7, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐತಿಹಾಸಿಕ ದಾಖಲೆಯನ್ನು ಮುರಿದು, ಕರ್ನಾಟಕದ ಇತಿಹಾಸದಲ್ಲಿ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಅವರ ಅಚಲ ಸಿದ್ಧಾಂತ ಮತ್ತು ಜನಪ್ರಿಯತೆಯ ಪ್ರತೀಕವಾಗಿದೆ. ​ಅರಸು ಮತ್ತು ಸಿದ್ದರಾಮಯ್ಯ: ಸಮಾಜಮುಖಿ ಹೋಲಿಕೆ ​ದೇವರಾಜ ಅರಸು ಅವರು ಹೇಗೆ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ‘ಕರ್ನಾಟಕದ ಕ್ರಾಂತಿಕಾರಿ ನಾಯಕ’ ಎನಿಸಿಕೊಂಡರೋ, ಸಿದ್ದರಾಮಯ್ಯನವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಧ್ವನಿಯಾಗಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮೈಸೂರು ಮಣ್ಣಿನ ಈ ಇಬ್ಬರು ನಾಯಕರು ಶೋಷಿತ ಸಮುದಾಯಗಳಿಗೆ ರಾಜಕೀಯ ಅಸ್ತಿತ್ವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ​ಉತ್ತಮ ಆಡಳಿತದ ಪ್ರಮುಖ ಮೈಲಿಗಲ್ಲುಗಳು ​ಸಿದ್ದರಾಮಯ್ಯನವರ ಆಡಳಿತವನ್ನು ಶ್ಲಾಘಿಸಲು ಮುಖ್ಯ ಕಾರಣ ಅವರ ‘ಜನಪರ ಯೋಜನೆಗಳು’. ಅವರ ಆಡಳಿತ ವೈಖರಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ಭದ್ರತೆಯ ಸುಂದರ ಸಮನ್ವಯವಿದೆ: ​ಭಾಗ್ಯಗಳ ಸರಣಿ: ಮೊದಲ ಅವಧಿಯಲ್ಲಿ (2013-18) ಜಾರಿಗೆ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಇಂದಿರಾ ಕ್ಯಾಂಟೀನ್’ನಂತಹ ಯೋಜನೆಗಳು ಬಡವರ ಹಸಿವು ನೀಗಿಸುವಲ್ಲಿ ಮೈಲಿಗಲ್ಲಾದವು. ​ಪಂಚ ಗ್ಯಾರಂಟಿಗಳು: ಎರಡನೇ ಅವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು (ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಇಂದು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿವೆ. ​ಆರ್ಥಿಕ ತಜ್ಞತೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದು. ಆರ್ಥಿಕ ಕೊರತೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವ ಇವರ ಚಾಣಕ್ಯತನ ಮೆಚ್ಚುವಂತದ್ದು. ​ನುಡಿದಂತೆ ನಡೆದ ಸರ್ಕಾರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ತೋರಿದ ಬದ್ಧತೆ ಮತದಾರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ​ತಳಮಟ್ಟದ ನಾಯಕತ್ವ ​ಸಿದ್ದರಾಮಯ್ಯನವರು ಯಾವುದೇ ‘ಹೈಕಮಾಂಡ್’ ನೆರಳಿನಲ್ಲದೆ, ಹಳ್ಳಿ ಹಳ್ಳಿಯ ಜನರೊಂದಿಗೆ ಬೆರೆತು ಬೆಳೆದ ನಾಯಕ. ಅವರ ನೇರ ನುಡಿ, ತರ್ಕಬದ್ಧ ಮಾತುಗಳು ಮತ್ತು ಸಂವಿಧಾನದ ಮೇಲಿನ ಗೌರವ ಅವರನ್ನು ಶ್ರೇಷ್ಠ ಸಂಸದೀಯ ಪಟುವನ್ನಾಗಿ ಮಾಡಿದೆ. ​”ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಬಡವರ ಕಣ್ಣೀರು ಒರೆಸುವ ಅವಕಾಶ” ಎಂಬ ಸಿದ್ಧಾಂತದೊಂದಿಗೆ ಅವರು ಮುನ್ನಡೆಯುತ್ತಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ​ಸಮಾರೋಪ ​ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿದ್ದರಾಮಯ್ಯನವರು, ಕರ್ನಾಟಕದ ಸಾಮಾಜಿಕ ನಕ್ಷೆಯಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅವರ ಈ ಪಯಣ ಕೇವಲ ಸುದೀರ್ಘ ಅವಧಿಯದ್ದಷ್ಟೇ ಅಲ್ಲದೆ, ‘ಸಮ ಸಮಾಜ’ದ ನಿರ್ಮಾಣದ ಹಾದಿಯಲ್ಲಿ ಒಂದು ಭರವಸೆಯ ನಡಿಗೆಯಾಗಿದೆ.

error: Content is protected !!