ಕೊಪ್ಪಳದಲ್ಲಿ ಕಲುಷಿತ ನೀರು ಸೇವನೆಯಿಂದ ಮತ್ತೊಂದು ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯವೆಂದು ಆರೋಪಿಸಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಬಾಲಕಿ ಸಾವು ಪ್ರಕರಣಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟ ಪ್ರಕರಣ ಇತ್ತೀಚೆಗೆ ನಡೆದಿತ್ತು.
ಇದೇ ರೀತಿಯ ಘಟನೆ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಸಂಭವಿಸಿದೆ. ಕಲುಷಿತ ನೀರು ಸೇವಿಸಿ ವಾಂತಿ, ಭೇದಿ ಉಂಟಾಗಿ ಬಾಲಕಿ ಅಸುನೀಗಿದ್ದಾಳೆ ಎಂದು ಶಂಕಿಸಲಾಗಿದೆ. ನಿರ್ಮಲಾ ಬೆಳಗಲ್ (10) ಮೃತಪಟ್ಟ ಬಾಲಕಿ.
ಕಳೆದ ರಾತ್ರಿ ಬಾಲಕಿಗೆ ವಾಂತಿ, ಬೇಧಿ ಆಗಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಿರಲಿಲ್ಲ. ಪೋಷಕರು ಇಂದು ಬೆಳಗ್ಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಮನೆಯಲ್ಲಿಯೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿ, ಆಸ್ಪತ್ರೆಗೆ ಕರೆತರುವ ಮುನ್ನವೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಬಾಲಕಿಯನ್ನು ಅತ್ತೆ ಮನೆಯಲ್ಲಿ ಬಿಟ್ಟು ಆಕೆಯ ತಂದೆ-ತಾಯಿ ಕೇರಳಕ್ಕೆ ಹೋಗಿದ್ದರು. ಕುಡಿಯುವ ನೀರಿನಿಂದಲೇ ವಾಂತಿ, ಬೇಧಿಯಾಗಿದೆ ಎಂದು ಬಾಲಕಿಯ ಅತ್ತೆ ಹನುಮವ್ವ ಹೇಳಿದರು. ಇದೇ ಗ್ರಾಮದಲ್ಲಿ ಈಗಾಗಲೇ ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ಧಾರೆ. ಘಟನೆಗೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೆಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಹೆಚ್‌ಒ ಪ್ರತಿಕ್ರಿಯೆ: ಕುಷ್ಟಗಿ ತಾಲೂಕ ಬಿಜಕಲ್ ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಲಕಾನಂದ ಭೇಟಿ ನೀಡಿ ಪರಿಶೀಲನ ನಡೆಸಿದರು. ”3000 ಜನಸಂಖ್ಯೆ ಇರುವ ಗ್ರಾಮದಲ್ಲಿ ಕುಡಿಯಲು ನೀರು ಯೋಗ್ಯವಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಕುಡಿಯಲು ಸೂಚನೆ ನೀಡಲಾಗಿತ್ತು. ಆದರೆ, ಮನೆ ಬಳಕೆಗೆಂದು ಇದೇ ಬೋರ್ವೆಲ್ ನೀರು ಬಿಡಿಸಿಕೊಂಡಿದ್ದಾರೆ. ಇದೀಗ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಬಾಲಕಿಯ ಸಾವಿನ ನಿಖರ ಕಾರಣವೇನು ಎನ್ನುವುದರ ಬಗ್ಗೆ ತಜ್ಞರು ವರದಿ ನೀಡಲಿದ್ದಾರೆ” ಎಂದು ಅವರು ಹೇಳಿದರು.
ಗ್ರಾಮ ಪಂಚಾಯತಿ ನಿರ್ಲಕ್ಷ್ಯ ಆರೋಪ: ”ಬಿಜಕಲ್ ಗ್ರಾಮದಲ್ಲಿ ಬಾಲಕಿ ಸಾವಿಗೆ ಕುಡಿಯುವ ನೀರಿನ ಪೈಪ್ಲೈನ್ಗೆ ಚರಂಡಿ ನೀರು ಸೇರಿದ್ದೇ ಕಾರಣ. ಐದಾರು ವರ್ಷದಿಂದ ಇದೇ ನೀರು ಕುಡಿಯುತ್ತಿದ್ದೇವೆ. ನಮಗೆ ತೊಂದರೆಯಾಗಿಲ್ಲ. ಆದರೆ, ಇತ್ತೀಚೆಗೆ ಪೈಪ್ಲೈನ್ ಒಡೆದಾಗ ಗ್ರಾಮ ಪಂಚಾಯತ್ ದುರಸ್ತಿ ಮಾಡಿಲ್ಲ. ಪೈಪ್ಲೈನ್ ಮೂಲಕ ಕೊಳಚೆ ನೀರು ಸೇರಿದೆ. ಅದನ್ನೇ ಕುಡಿಯಲು ಬಳಸುತ್ತಿದ್ದಾರೆ. ಹೀಗಾಗಿ, ಗ್ರಾಮ ಪಂಚಾಯತಿ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿದೆ” ಎಂದು ಗ್ರಾಮಸ್ಥರು ದೂರಿದ್ದಾರೆ.
ಬಾಲಕಿಯ ಕುಟುಂಬಕ್ಕೆ ಗ್ರಾಮ ಪಂಚಾಯತಿಯವರೇ ಪರಿಹಾರ ನೀಡಬೇಕು ಎಂದು ಕೂಡ ಆಗ್ರಹಿಸಿದ್ದಾರೆ. ಮೊದಲೆರಡು ಸಾವುಗಳಿಗೆ ಕಲುಷಿತ ನೀರು ಸೇವನೆ ಕಾರಣವಲ್ಲ ಎಂದು ಮಾಧ್ಯಮದವರಿಗೆ ಹೇಳಿದ್ದ ಆರೋಗ್ಯ ಇಲಾಖೆ, ಬಾಲಕಿಯ ಸಾವಿಗೆ ಕಾರಣ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕು.
More Stories
ಜಾತಿ ನಿಂದನೆ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ- ಸುಪ್ರೀಂಕೋರ್ಟ್
ನಾನು ಸರ್ಕಾರಿ ಸವಲತ್ತುಗಳನ್ನು ನಿರಾಕರಿಸಿದ್ದೇನೆ ; ಶಾಸಕ ಬಸವರಾಜ ರಾಯರಡ್ಡಿ