ಗೋಗೇರಿ ಗ್ರಾಮದಲ್ಲಿ ಸಡಗರದ ಈದುಲ್ ಫಿತ್ರ: ಸಾಮೂಹಿಕ ನಮಾಜ್ ಮೂಲಕ ಶಾಂತಿ, ಸಾಮರಸ್ಯಕ್ಕೆ ಪ್ರಾರ್ಥನೆ

ಗೋಗೇರಿ ಗ್ರಾಮದಲ್ಲಿ ಸಡಗರದ ಈದುಲ್ ಫಿತ್ರ: ಸಾಮೂಹಿಕ ನಮಾಜ್ ಮೂಲಕ ಶಾಂತಿ, ಸಾಮರಸ್ಯಕ್ಕೆ ಪ್ರಾರ್ಥನೆ

ಕೊಡತಗೇರಿ ಡಿಜಿಟಲ್ ಹೌಸ್

ಗದಗ: ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಗೋಗೇರಿ ಗ್ರಾ ಮದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಈದುಲ್ ಫಿತ್ರ (ರಂಜಾನ್) ಹಬ್ಬವನ್ನು ಆಚರಿಸಿದರು. ಒಂದು ತಿಂಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದ ಸಮುದಾಯದ ಬಾಂಧವರು, ಹಬ್ಬದ ಅಂಗವಾಗಿ ಗ್ರಾಮದ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡುವ ಮೂಲಕ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

​ಗ್ರಾಮದ ಮದೀನಾ ಮಸೀದಿಯ ಧರ್ಮಗುರುಗಳಾದ ಹಾಫಿಜ ಬರಕತ್ ಅಲಿ ಅವರು ಹಬ್ಬದ ಸಂದೇಶ ನೀಡಿ, “ಉಪವಾಸ ಎಂಬುದು ಕೇವಲ ಆಹಾರ ತ್ಯಜಿಸುವುದಲ್ಲ, ಬದಲಾಗಿ ಅದು ಮನಸ್ಸನ್ನು ನಿಯಂತ್ರಿಸುವ ಮತ್ತು ಬುದ್ಧಿಯನ್ನು ಶುದ್ಧೀಕರಿಸುವ ಕ್ರಿಯೆಯಾಗಿದೆ. ರಂಜಾನ್ ತಿಂಗಳಲ್ಲಿ ನಾವು ಪಡೆದ ಈ ಶಿಸ್ತು ಮತ್ತು ತಾಳ್ಮೆಯ ತರಬೇತಿಯನ್ನು ವರ್ಷದ ಉಳಿದ ಹನ್ನೊಂದು ತಿಂಗಳುಗಳ ಕಾಲವೂ ಪಾಲಿಸಿದಾಗ ಮಾತ್ರ ಹಬ್ಬದ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ,” ಎಂದು ತಿಳಿಸಿದರು.

​ಮುಂದುವರಿದು ಮಾತನಾಡಿದ ಅವರು, “ನಮ್ಮ ಆತ್ಮಕ್ಕೆ ಹಬ್ಬವು ಶಕ್ತಿ ಮತ್ತು ಆಶೀರ್ವಾದವನ್ನು ನೀಡುತ್ತದೆ. ನಾವು ಸದಾ ಸುಖ-ಶಾಂತಿಯಿಂದ ಇರಬೇಕಾದರೆ ದೇವರ ಕೃಪೆ ಅತ್ಯಗತ್ಯ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಅಂತಃಕರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಕಡ್ಡಾಯವಾಗಿ ದಾನ (ಫಿತ್ರಾ) ಮಾಡುವ ಮೂಲಕ ಬಡವರ ಕಣ್ಣೀರು ಒರೆಸಬೇಕು,” ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಸಾಬ ಬಾಗವಾನ ಅವರು ಮಾತನಾಡುತ್ತಾ, ಹಬ್ಬಗಳ ಮೂಲಕ ಸಮಾಜದಲ್ಲಿ ಭಾವೈಕ್ಯತೆ ಮೂಡಲಿ ಎಂದು ಹಾರೈಸಿದರು.

​ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ದಾವಲಸಾಬ ಬಾಗವಾನ, ಹುಸೇನಸಾಬ ಬಡಿಗೇರ, ಯಮನೂರಸಾಬ ನಧಾಪ್, ಆಯ್ ಎಚ್ ಬಾಗವಾನ, ರಾಜೇಸಾಬ ಬಡಿಗೇರ, ಇಮಾಮಸಾಬ ಬಾಗವಾನ, ಶಾಬುದ್ದೀನ ನಧಾಪ್, ರಾಜು ವಾಲಿಕಾರ, ಕೆ ಕೆ ಬಾಗವಾನ, ಅಮೀನಸಾಬ ಬಾಗವಾನ ಹಾಗೂ ಶಿಕ್ಷಕರಾದ ಆರ್ ಕೆ ಬಾಗವಾನ, ಹುಸೇನ್ ಬಾಗವಾನ ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ವರದಿ: ವಿಶೇಷ ವರದಿಗಾರರು, ಗಜೇಂದ್ರಗಡ.

error: Content is protected !!