ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ
Kodatageri express nwes
ಬೆಂಗಳೂರು, (ಡಿಸೆಂಬರ್ 14): ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ( Shamanur Shivashankarappa )ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಡಿಸೆಂಬರ್ 14) ಸಂಜೆ ಕೊನೆಯುಸಿರೆಳೆದಿದ್ದಾರೆ.
94 ವರ್ಷದ ಶಾಮನೂರು ಶಿವಶಂಕರಪ್ಪ ಅವರಿಗೆ 94 ವಯಸ್ಸಾಗಿದ್ದು, ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದ್ರೆ, ವಯೋಸಹಜ ಅನಾರೋಗ್ಯದ ಹಿನ್ನೆಲೆ ಕಳೆ ದಿನಗಳಿಂದ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆಗಲೇ ಬೇರೆ ಬೇರೆ ಸುದ್ದಿ ಹರಿದಾಡಿದ್ದರಿಂದ ಈ ಬಗ್ಗೆ ಪುತ್ರ, ಸಚಿವ ಎಸ್ಎಸ್ ಮಲ್ಲಿಕಾರ್ಜುನ ಆವರು ಪ್ರತಿಕ್ರಿಯಿಸಿ ತಮ್ಮ ತಂದೆ ಚೆನ್ನಾಗಿದ್ದಾರೆ. ಗುರು ಹಿರಿಯರ ಆಶೀರ್ವಾದದಿಂದ ಇನ್ನೊಂದು ವಾರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದರು. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ತಮ್ಮ ನಾಯಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆಯ ಎಂಸಿಸಿ ಎ ಬ್ಲಾಕ್ ನಲ್ಲಿರುವ ಶಾಮನೂರು ಶಿವಶಂಕರಪ್ಪನವರ ನಿವಾಸದತ್ತ ದೌಡಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆ ಭೇಟಿ ನೀಡಿ ಶಿವಶಂಕರಪ್ಪ ಅವರ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದ್ದರು. ಹಾಗೇ ಅದೇ ವೇಳೆ ಆಸ್ಪತ್ರೆಯಲ್ಲಿದ್ದ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಮಾವನ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆ ಕುರಿತು ಸಿಎಂಗೆ ವಿವರಿಸಿದ್ದರು. ಹೀಗೆ ಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯ ವಿಚಾರಿಸಿದ್ದರು. ಇನ್ನು ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯ ಸುಧಾರಣೆಯಾಗಲಿ ಎಂದು ದಾವಣಗೆರೆಯಲ್ಲಿ ಅವರ ಅಭಿಮಾನಿಳಿಂದ ಪ್ರಾರ್ಥನೆ, ಪೂಜೆಗಳು ನಡೆದಿದ್ದವು.
ಭಾರತದ ಅತ್ಯಂತ ಹಿರಿಯ ಶಾಸಕರಾಗಿ ಎನಿಸಿಕೊಂಡಿದ್ದ ಶಾಮನುರ ಶಿವಶಂಕರಪ್ಪ ಅವರು ಜೂನ್ 16, 1931 ರಂದು ದಾವಣಗೆರೆಯಲ್ಲಿ ಜನಿಸಿದ್ದ ಇವರು, ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯ, ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಹಲವು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಶಾಮನೂರು ಶಿವಶಂಕರಪ್ಪ ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಸಚಿವರೂ ಸಹ ಆಗಿದ್ದರು. ಅಲ್ಲದೇ ದಾವಣಗೆರೆಯ ಅಂಗವಿಕಲರ ಆಶಕಿರಣ ಟ್ರಸ್ಟ್, ದಾವಣಗೆರೆ ಕ್ರಿಕೆಟ್ ಕ್ಲಬ್ ಮತ್ತು ದಾವಣಗೆರೆ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷ, ಅಖಿಲ ಭಾರತ ವೀರಶಿವ ಮಹಾಸಭೆಯ ಅಧ್ಯಕ್ಷ, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆ ಹಾಗೂ ಬಾಪುಜಿ ಎಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.

More Stories
ಕಲಿಯುಗದ ಕುಡಕನ ಲವ್ಹ್ ಕಹಾನಿ
ಅನ್ನಭಾಗ್ಯದ 300 ಕ್ವೀಂಟಾಲ ಅಕ್ಕಿ ಜಪ್ತಿ
ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್. ಎತ್ತಂಗಡಿ