June 10, 2026

ಗೋಗೇರಿ ಗ್ರಾಮದಲ್ಲಿ ನೂತನ ಪಿಯುಸಿ ಕಾಲೇಜು ಆರಂಭ: ಗ್ರಾಮಸ್ಥರಲ್ಲಿ ಹರ್ಷ

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ನೂತನವಾಗಿ ವಾಣಿಜ್ಯ ವಿಭಾಗದ ಪಿಯುಸಿ ಕಾಲೇಜು ಪ್ರಾರಂಭವಾಗಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಈ ಬೆಳವಣಿಗೆಯ ಬಗ್ಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
​ಈ ಕುರಿತು ನಡೆದ ಸಮಾರಂಭದಲ್ಲಿ ಮಾತನಾಡಿದ ವಕೀಲರು ಹಾಗೂ ಶಿಕ್ಷಣ ಪ್ರೇಮಿ ಕೆ.ಎಸ್. ಕೊಡತಗೇರಿ ಅವರು, “ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಗಳಿಗೆ ಅಲೆಯುವ ಸ್ಥಿತಿ ಇತ್ತು. ಈಗ ನಮ್ಮ ಗ್ರಾಮದಲ್ಲೇ ಕಾಲೇಜು ಪ್ರಾರಂಭವಾಗಿರುವುದು ಶೈಕ್ಷಣಿಕವಾಗಿ ದೊಡ್ಡ ಸಾಧನೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
​ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಸಿ. ನಾಗನೂರ, ಆಯ್.ಎಚ್. ಬಾಗವಾನ, ಎಂ.ಜೆ. ಗಾರಗಿ, ಕಟ್ಟೆಪ್ಪ ಮಾದರ, ಶಿಕ್ಷಕರಾದ ಪೂಜಾರ, ಬಸವರಾಜ ಮಾದರ, ಕಳಕಪ್ಪ ಸೂಡಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ಜೆ. ಸೇರಿದಂತೆ ಗ್ರಾಮದ ಗಣ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
​ಗ್ರಾಮದಲ್ಲಿ ಪಿಯುಸಿ ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ಈ ಕ್ರಮವು ಸ್ಥಳೀಯ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.