ಆಸ್ತಿ ವಿವಾದಕ್ಕೆ ಎಸ್‌ಸಿ/ಎಸ್‌ಟಿ ಕಾಯ್ದೆ ಅಸ್ತ್ರ: ಹೈಕೋರ್ಟ್‌ನಿಂದ ಮಹತ್ವದ ತೀರ್ಪು, ಎಫ್‌ಐಆರ್ ರದ್ದು
ಬೆಂಗಳೂರು: ಸಿವಿಲ್ ವ್ಯಾಜ್ಯಗಳನ್ನು ಕ್ರಿಮಿನಲ್ ಪ್ರಕರಣಗಳಾಗಿ ತಿರುಚಿ, ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿರುವ ಹೈಕೋರ್ಟ್, ನಾಗರಿಕ ವಿವಾದಗಳಿಗೆ ಕ್ರಿಮಿನಲ್ ಮುಖವಾಡ ತೊಡಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಮಹಾಲಿಂಗಪುರದಲ್ಲಿರುವ 6.20 ಎಕರೆ ಜಮೀನಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಆರೋಪಿಗಳ ನಡುವೆ 2016ರಿಂದಲೂ ಸಿವಿಲ್ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿದಿದೆ. ಈ ಆಸ್ತಿ ವಿವಾದಾತ್ಮಕ ಹಂತದಲ್ಲಿರುವಾಗಲೇ, ದೂರುದಾರೆ ಉಮಾ ಎಂಬುವವರು ಮಂಜುನಾಥ್ ಸೇರಿದಂತೆ ಏಳು ಜನರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಮೀನಿನಲ್ಲಿದ್ದ ತಮ್ಮ ತಂದೆಯ ಸಮಾಧಿ ಕಲ್ಲನ್ನು ಕಿತ್ತುಹಾಕಲಾಗಿದೆ ಹಾಗೂ ತಮ್ಮ ಕುಟುಂಬಕ್ಕೆ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು.
ಹೈಕೋರ್ಟ್ ಕಣ್ಣುತೆರೆಸುವ ತೀರ್ಪು:
ಪೊಲೀಸ್ ತನಿಖೆ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸenn ಅವರಿದ್ದ ಏಕಸದಸ್ಯ ಪೀಠ, ಇದು ಸಂಪೂರ್ಣವಾಗಿ ಸಿವಿಲ್ ಸ್ವರೂಪದ ವಿವಾದ ಎಂದು ಅಭಿಪ್ರಾಯಪಟ್ಟಿದೆ.
ಆಸ್ತಿಯ ಹಕ್ಕು ಯಾರಿಗೆ ಸೇರಬೇಕು ಎಂಬುದು ಸಿವಿಲ್ ನ್ಯಾಯಾಲಯದಲ್ಲಿ ಇನ್ನೂ ನಿರ್ಧಾರವಾಗದ ಹಿನ್ನೆಲೆಯಲ್ಲಿ, ಸಿವಿಲ್ ಜಗಳವನ್ನು ಮುಂದಿಟ್ಟುಕೊಂಡು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡುವುದು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಎಂದು ನ್ಯಾಯಾಲಯ ಕಠಿಣ ಮಾತುಗಳಲ್ಲಿ ಎಚ್ಚರಿಸಿದೆ.
ನ್ಯಾಯಾಲಯಗಳ ವ್ಯಾಪ್ತಿಗೆ ಬರುವ ಆಸ್ತಿ ವಿಚಾರಗಳನ್ನು ಸಿವಿಲ್ ನ್ಯಾಯಾಲಯದಲ್ಲೇ ಇತ್ಯರ್ಥಪಡಿಸಿಕೊಳ್ಳಬೇಕೆ ಹೊರತು, ದ್ವೇಷ ಸಾಧನೆಗಾಗಿ ಕ್ರಿಮಿನಲ್ ಕಾನೂನನ್ನು ಅಸ್ತ್ರವನ್ನಾಗಿ ಬಳಸಿ ಎದುರಾಳಿಗಳಿಗೆ ಕಿರುಕುಳ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಎಚ್ಚರಿಸಿದೆ. ಈ ಮೂಲಕ ಆಸ್ತಿ ಕಲಹಗಳಿಗೆ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವವರಿಗೆ ಈ ತೀರ್ಪು ಪ್ರಮುಖ ಎಚ್ಚರಿಕೆಯ ಸಂದೇಶವಾಗಿದೆ.

More Stories
8 ವರ್ಷಗಳ ಬಳಿಕ ಮತ್ತೆ ಆಕ್ಷನ್ ಕಟ್ ಹೇಳಲು ಮುಂದಾದ ಪ್ರಭಿಕ್ ಮೊಗವೀರ!
ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಂತರಿಕ ವಿವಾದ: ಭಕ್ತರಲ್ಲಿ ಆತಂಕದ ನೆರಳು
155 ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳಿಗೆ ರೂ. 71.85 ಕೋಟಿ ಅನುದಾನ: ತಾರತಮ್ಯ ಆರೋಪ ತಳ್ಳಿಹಾಕಿದ ಸಿದ್ದರಾಮಯ್ಯ