June 12, 2026

155 ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳಿಗೆ ರೂ. 71.85 ಕೋಟಿ ಅನುದಾನ: ತಾರತಮ್ಯ ಆರೋಪ ತಳ್ಳಿಹಾಕಿದ ಸಿದ್ದರಾಮಯ್ಯ

155 ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳಿಗೆ ರೂ. 71.85 ಕೋಟಿ ಅನುದಾನ: ತಾರತಮ್ಯ ಆರೋಪ ತಳ್ಳಿಹಾಕಿದ  ಸಿದ್ದರಾಮಯ್ಯ

ಕೊಡತಗೇರಿ ಎಕ್ಸ್‌ಪ್ರೆಸ್‌ ಡಿಜಿಟಲ್ ಹೌಸ್

ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ವಿವಿಧ ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ರೂ. 71.85 ಕೋಟಿ ವೆಚ್ಚದಲ್ಲಿ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

​ಈ ಕುರಿತು ವಿವರಣೆ ನೀಡಿರುವ ಸಿದ್ದರಾಮಯ್ಯ ಯಾವುದೇ ಸಮುದಾಯದ ಬಗ್ಗೆ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುರುಬ ಸಮುದಾಯಕ್ಕೆ ಹೆಚ್ಚಿನ ಅನುದಾನ ಸಿಕ್ಕಿರುವ ಬಗ್ಗೆ ಕೇಳಿಬಂದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಇಲಾಖೆಗೆ ಸಲ್ಲಿಕೆಯಾದ ಮನವಿಗಳಲ್ಲಿ ಕುರುಬ ಸಮುದಾಯದ ಮನವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣಕ್ಕೆ ಅವರಿಗೆ ಅನುದಾನ ಸಂದಾಯವಾಗಿದೆ, ಹೊರತು ಉದ್ದೇಶಪೂರ್ವಕವಾಗಿ ಯಾವುದೇ ತಾರತಮ್ಯ ಮಾಡಲಾಗಿಲ್ಲ,” ಎಂದು ಹೇಳಿದ್ದಾರೆ.

ಅನುದಾನ ಹಂಚಿಕೆಯ ಮಾನದಂಡಗಳು:

ಸರ್ಕಾರದ ಆದೇಶದಂತೆ, ಪ್ರವರ್ಗ-1 ಮತ್ತು 2A ವ್ಯಾಪ್ತಿಗೆ ಬರುವ ಜಾತಿಗಳಿಗೆ ಶೇ. 70 ರಷ್ಟು ಮತ್ತು ಪ್ರವರ್ಗ 3A ಹಾಗೂ 3B ವ್ಯಾಪ್ತಿಗೆ ಬರುವ ಜಾತಿಗಳಿಗೆ ಶೇ. 30 ರಷ್ಟು ಅನುದಾನವನ್ನು ನಿಗದಿಪಡಿಸಲಾಗಿದೆ. ಪ್ರವರ್ಗ-1 ಮತ್ತು 2A ನಲ್ಲಿ ಹೆಚ್ಚಿನ ಸಂಖ್ಯೆಯ ಜಾತಿಗಳು ಇರುವುದರಿಂದ ಆ ವರ್ಗಗಳಿಗೆ ಸಹಜವಾಗಿಯೇ ಹೆಚ್ಚಿನ ಅನುದಾನ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಯಾವೆಲ್ಲಾ ಸಮುದಾಯಗಳಿಗೆ ಅವಕಾಶ?

ಕುರುಬ ಜನಾಂಗದ ಜೊತೆಗೆ ಮಡಿವಾಳ, ಲಿಂಗಾಯಿತ, ಒಕ್ಕಲಿಗ, ಬೆಸ್ತ, ಬಲಿಜ, ಗೊಲ್ಲ, ಜೆಟ್ಟಿ, ಕುಂಬಾರ, ಅರಸು, ಹೆಳವ, ಸವಿತಾ ಸಮಾಜ, ಉಪ್ಪಾರ, ಗಾಣಿಗ, ಕುರುಹಿನ ಶೆಟ್ಟಿ, ಹಾಲಕ್ಕಿ ಹಾಗೂ ರೆಡ್ಡಿ ಸಮುದಾಯದ ಸಂಘ-ಸಂಸ್ಥೆಗಳಿಗೂ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಪೂರ್ವಭಾವಿ ಆದೇಶ ನೀಡಲಾಗಿದೆ.

ಅನುದಾನ ಬಿಡುಗಡೆಗೆ ಷರತ್ತುಗಳು:

ಇದು ಅಂತಿಮ ಪಟ್ಟಿ ಅಲ್ಲ ಎಂದು ಸ್ಪಷ್ಟಪಡಿಸಿರುವ ಸಿದ್ದರಾಮಯ್ಯ ಅನುದಾನ ಬಿಡುಗಡೆಗೆ ಕೆಲವು ಕಠಿಣ ನಿಯಮಗಳನ್ನು ವಿಧಿಸಿದ್ದಾರೆ:

  • ​ಸಂಬಂಧಪಟ್ಟ ಸಂಘ-ಸಂಸ್ಥೆಗಳು ತಮ್ಮ ಹೆಸರಿನಲ್ಲಿ ಜಮೀನು/ನಿವೇಶನ ಹೊಂದಿರಬೇಕು.
  • ​ಸ್ಥಳೀಯ ಪುರಸಭೆ/ಪಂಚಾಯತಿಯಿಂದ ಕಟ್ಟಡ ನಿರ್ಮಾಣದ ಲೈಸೆನ್ಸ್ ಪಡೆದಿರಬೇಕು.
  • ​ಸಂಘ-ಸಂಸ್ಥೆಗಳ ಕಳೆದ 3 ವರ್ಷಗಳ ಆಡಿಟ್ ವರದಿಯನ್ನು ಸಲ್ಲಿಸಬೇಕು.
  • ​ಜಿಲ್ಲಾಧಿಕಾರಿಗಳ ಮೂಲಕ ದಾಖಲೆಗಳನ್ನು ಪರಿಶೀಲಿಸಿ, ಸರ್ಕಾರಿ ಮಾರ್ಗಸೂಚಿಯಂತೆ 3 ಹಂತಗಳಲ್ಲಿ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುವುದು.

​ಇದು ನಿರಂತರ ಪ್ರಕ್ರಿಯೆಯಾಗಿದ್ದು, ಬಾಕಿ ಇರುವ ಮನವಿಗಳನ್ನೂ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.